ವೈಮಾಂತರಿಕ್ಷ ಎಂಜಿನಿಯರಿಂಗ್
-	ವಾಯುಮಂಡಲದಲ್ಲಿ ಮತ್ತು ಬಾಹ್ಯಾಂತರಿಕ್ಷದಲ್ಲಿ ಕಾರ್ಯನಿರ್ವಹಿಸುವ ವಾಹನಗಳ ವಿನ್ಯಾಸ, ಅಭಿವೃದ್ಧಿ ಹಾಗೂ ನಿರ್ವಹಣೆ ಕುರಿತ ಅಧ್ಯಯನ (ಏರೊಸ್ಪೇಸ್ ಎಂಜಿನಿಯರಿಂಗ್). ಭೂಮಿಯನ್ನು ಆವರಿಸಿರುವ ವಾಯುಮಂಡಲ ಹಾಗೂ ಬಾಹ್ಯ ಅಂತರಿಕ್ಷವನ್ನು ಏಕ ಸಂಯುಕ್ತ ಕ್ಷೇತ್ರವೆಂದು ಪರಿಗಣಿಸಿ ಹಾರಾಟದ ವಾಹನಗಳನ್ನು ಅಭಿವೃದ್ಧಿಪಡಿಸಲು ವಿಮಾನಯಾನ ಎಂಜಿನಿಯರಿಂಗ್ ಮತ್ತು ಆಂತರಿಕ್ಷಯಾನ ಎಂಜಿನಿಯರಿಂಗ್‍ಗಳನ್ನು ಒಂದುಗೂಡಿಸಿ 1958ರಲ್ಲಿ ಮೊದಲ ಬಾರಿಗೆ ವೈಮಾಂತರಿಕ್ಷ ಎಂಜಿನಿಯರಿಂಗ್ ಎಂದು ನಾಮಕರಣ ಮಾಡಿದರು. 

	ಒಂದು ಪ್ಲಾವನ ವಾಹನವನ್ನು (ಫ್ಲೈಟ್ ವೆಹಿಕಲ್) ವಿನ್ಯಾಸ ಗೊಳಿಸಲು ಎಂಜಿನಿಯರಿಂಗ್‍ನ ವಿವಿಧ ಶಾಖೆಗಳ ಜ್ಞಾನದ ಆವಶ್ಯಕತೆ ಇದೆ. ಒಬ್ಬನೇ ವ್ಯಕ್ತಿ ಇವೆಲ್ಲವನ್ನೂ ನಿರ್ವಹಿಸಲಾರ. ವಾಯುಗತಿ ವಿಜ್ಞಾನ, ನೋದನವ್ಯವಸ್ಥೆ, ರಚನಾವಿನ್ಯಾಸ, ಪದಾರ್ಥವಿಜ್ಞಾನ (ನಿರ್ಮಾಣವಸ್ತುವಿಜ್ಞಾನ), ವಿಮಾನೋಪಕರಣಗಳು, ಸ್ಥಿರತೆ ಮತ್ತು ನಿಯಂತ್ರಣ ವ್ಯವಸ್ಥೆ ಮುಂತಾದ ವಿಷಯಗಳಲ್ಲಿ ವಿಶೇಷ ಪರಿಣತಿ ಪಡೆದ ಒಂದು ಪಡೆಯೇ ಈ ಕಾರ್ಯದಲ್ಲಿ ನಿರತವಾಗಿರುತ್ತದೆ. ಈ ಎಲ್ಲ ವಿಜ್ಞಾನಶಾಖೆಗಳಿಗೂ ಸರಿಹೊಂದುವಂಥ ಏಕಮಾತ್ರ ವಿನ್ಯಾಸ ಲಭ್ಯವಿಲ್ಲವಾದರೂ ವಾಹನದ ವಿಶಿಷ್ಟ ವಿವರಗಳು, ಲಭ್ಯವಿರುವ ತಂತ್ರವಿದ್ಯೆ ಹಾಗೂ ಆರ್ಥಿಕ ಸಾಧ್ಯತೆಗಳನ್ನು ಸಮನ್ವಯಗೊಳಿಸಿ ವಿನ್ಯಾಸಗಳನ್ನು ಸಿದ್ಧಪಡಿಸಲಾಗುತ್ತದೆ. 

	ವಿಮಾನಯಾನದ ಇತಿಹಾಸ : ವಿಮಾನಯಾನ ಎಂಜಿನಿಯರಿಂಗ್‍ನ ಮೂಲವನ್ನು ಯಾಂತ್ರಿಕ ಎಂಜಿನಿಯರಿಂಗ್‍ನ ಪ್ರಾರಂಭಿಕ ದಿನಗಳಲ್ಲಿ, ಪ್ರಾಚೀನ ಕಾಲದ ಸಂಶೋಧಕರ ಪರಿಕಲ್ಪನೆಗಳಲ್ಲಿ ಮತ್ತು ಸೈದ್ಧಾಂತಿಕ ಭೌತವಿಜ್ಞಾನದ ಒಂದು ಭಾಗವಾದ ವಾಯುಗತಿವಿಜ್ಞಾನದ ಪ್ರಾರಂಭಿಕ ಅಧ್ಯಯನಗಳಲ್ಲಿ ಗುರುತಿಸಬಹುದು. 

	ಲಿಯೋನಾರ್ಡೋಡವಿಂಚಿ (1452-1519) ಪ್ಲಾವನ ವಾಹನಗಳ ಮೊದಲ ನಕ್ಷೆಗಳನ್ನು ತಯಾರಿಸಿದ. ವಸ್ತುಗಳನ್ನು ಆಧರಿಸುವ ಅಥವಾ ತಳ್ಳುವ ಶಕ್ತಿಯನ್ನು ಗಾಳಿ ನೀಡುತ್ತದೆಂಬ ನಂಬಿಕೆಯಿಂದ ಅವನು ಹಾರುವಾಹನಗಳ ಎರಡು ಕಲ್ಪನೆಗಳನ್ನು ಮುಂದಿಟ್ಟ. ಅವುಗಳಲ್ಲಿ ಒಂದಕ್ಕೆ ಆರ್ನಿತೋಪ್ಟರ್ (ಆರ್ನಿತೋ - ಪಕ್ಷಿ) ಎಂದೂ ಇನ್ನೊಂದಕ್ಕೆ ಏರಿಯಲ್ ಸ್ಕ್ರೂ ಎಂದೂ ಹೆಸರಿಟ್ಟ. ಆರ್ನಿತೋಪ್ಟರ್ ಒಂದು ಹಾರುಯಂತ್ರವಾಗಿದ್ದು ಹಕ್ಕಿಗಳ ಹಾರಾಟವನ್ನು ಹೋಲುವಂತೆ ಅದಕ್ಕೆ ಎರಡು ಚಲಿಸುವ ರೆಕ್ಕೆಗಳಿದ್ದುವು. ಏರಿಯಲ್ ಸ್ಕ್ರೂ ಇಂದಿನ ಹೆಲಿಕಾಪ್ಟರ್‍ನ ಜನಕದಂತಿತ್ತು. 

	ಆಕಾಶದಲ್ಲಿ ಮಾನವನ ಮೊದಲ ಹಾರಾಟ 1783ರಲ್ಲಿ ನಡೆಯಿತು. ಫ್ರಾನ್ಸ್ ದೇಶದ ಮಾಂಟ್ಗೋಲ್ಫಿಯರ್ ಸಹೋದರರು (ಜೋಸೆಫ್ ಮಿಚೆಲ್ 1740-1810, ಜೇಕ್ಸ್ ಏಟಿಏನ್ 1745-99) ವಿನ್ಯಾಸಗೊಳಿಸಿದ ಬಿಸಿಗಾಳಿ ಬಲೂನಿನಲ್ಲಿ 622.6 ಘನಗಳಷ್ಟು ಬಿಸಿಗಾಳಿ ತುಂಬಿಸಿ 1783 ಜೂನ್ 5ರಂದು ಅದರಲ್ಲಿ ಕುಳಿತು ಹಾರಾಟ ನಡೆಸಿದರು. ಈ ಬಲೂನು ಭೂಮಿಯಿಂದ 1,544 ಮೀ ಮೇಲಕ್ಕೇರಿ ಗಾಳಿಬೀಸುವ ದಿಕ್ಕಿನಲ್ಲಿ ಒಂದುವರೆ ಕಿಲೋಮೀಟರಿನಷ್ಟು ದೂರಕ್ರಮಿಸಿ ಕೆಳಗೆ ಇಳಿಯಿತು. ಮುಂದೆ ಇಂಥ ಬಲೂನಿನಲ್ಲಿ ದೂರ ಪ್ರಯಾಣಮಾಡಲು ನೋದನವ್ಯವಸ್ಥೆಯ ಬಗ್ಗೆ ಯೋಚನೆ ಬಂದಾಗ ವಾಯುಗತಿವಿಜ್ಞಾನ ಪ್ರಾಮುಖ್ಯ ಪಡೆಯಿತು. ಬೆಂಜಮಿನ್ ಫ್ರಾಂಕ್ಲಿನ್ (1706-90) ಮೊತ್ತಮೊದಲು ಈ ಕಲ್ಪನೆಯನ್ನು ಮುಂದಿಟ್ಟ. ಮುಂದಿನ ದಿನಗಳಲ್ಲಿ ಇದು ಚಲಿಸುವ ಆಕಾಶಬುಟ್ಟಿಗಳ (ಡಿರಿಜಿಬಲ್) ಮತ್ತು ಆಕಾಶನೌಕೆಗಳ (ಬ್ಲಿಂಪ್ಸ್) ನಿರ್ಮಾಣಕ್ಕೆ ಕಾರಣವಾಯಿತು. ಫ್ರಾನ್ಸ್ ದೇಶದ ಹೆನ್ರಿ ಗಿಫರ್ಡ್ ಎಂಬಾತ 1852ರಲ್ಲಿ ಶಕ್ತಿಚಾಲಿತ ಬಲೂನನ್ನು ಸಿದ್ಧಪಡಿಸಿದ. ಇದಕ್ಕೆ ಚಿಕ್ಕದೊಂದು ಉಗಿಚಾಲಿತ ಎಂಜಿನ್ ಜೋಡಿಸಿ ಹಾರಾಟ ಸಾಧ್ಯವೆಂದು ತೋರಿಸಿದ. ವಾಯುವಿಗಿಂತ ಹಗುರವಾದ ಇಂಥ ವಾಹನಗಳ ಅಭಿವೃದ್ಧಿ ಸಾಮಾನ್ಯ ವಿಮಾನಾಭಿವೃದ್ಧಿಯೊಡನೆ ಸೇರಿಕೊಳ್ಳದೆ ಸ್ವತಂತ್ರ ಮತ್ತು ಸಮಾನಾಂತರವಾಗಿ ನಡೆಯಿತು. 

	ಬಿಸಿಗಾಳಿ, ಹೈಡ್ರೊಜನ್ ಅಥವಾ ಹೀಲಿಯಮ್‍ಗಳಂಥ ಅನಿಲಗಳನ್ನು ಈ ನೌಕೆಗಳಲ್ಲಿ ತುಂಬಲಾಗುತ್ತಿತ್ತು. ಇವು ಗಾಳಿಗಿಂತ ಹಗುರವಾದ್ದರಿಂದ ಸುಲಭವಾಗಿ ವಾಯುಮಂಡಲದಲ್ಲಿ ಮೇಲೇರಿ ತೇಲುತ್ತಿದ್ದುವು. ಆದರೆ ಇವನ್ನು ಬೇಕಾದಂತೆ ಮುನ್ನಡೆಸಲು ಸಾಧ್ಯವಿರಲಿಲ್ಲ. ವಾಯುವಿಗಿಂತ ಭಾರವಾದ ವಿಮಾನಗಳು ಬಳಕೆಗೆ ಬಂದೊಡನೆ ಈ ಆಕಾಶಬುಟ್ಟಿಗಳಿಗೆ ಹಿನ್ನಡೆ ಉಂಟಾದರೂ ಒಂದನೆಯ ಮಹಾಯುದ್ಧದ ತರುವಾಯ ಇವು ಮತ್ತೆ ಮರುಜನ್ಮ ಪಡೆದುವು. ಆಕಾಶನೌಕೆಗಳಿಗೆ ನೋದನವ್ಯವಸ್ಥೆಯನ್ನು ಜೋಡಿಸಿ ಹಾರಾಟದ ಎಲ್ಲ ಮೂರು ಅಕ್ಷಗಳಲ್ಲಿ ಅವುಗಳನ್ನು ನಿಯಂತ್ರಿಸುವಂತೆ ಮಾಡಲಾಯಿತು. ಆದರೆ ಎಲ್ಲ ಹವಾಮಾನ ಪರಿಸ್ಥಿತಿಗೂ ಸರಿಹೊಂದುವಂಥ ಆಕಾಶನೌಕೆಗಳನ್ನು ನಿರ್ಮಿಸುವುದು ಅಸಾಧ್ಯವಾಯಿತು. ಅಮೆರಿಕದಲ್ಲಿ ನಿರ್ಮಾಣವಾದ ಶೆನಾಂಡೋ ಆಕ್ರಾನ್ ಮತ್ತು ಮೇಕಾನ್ ಎಂಬ ಆಕಾಶ ಬುಟ್ಟಿಗಳು ಸುಂಟರಗಾಳಿಯಲ್ಲೂ ಜರ್ಮನಿಯ ಹಿಂಡೆನ್‍ಬರ್ಗ್ ಎಂಬ ನೌಕೆ ಅದರಲ್ಲಿಯ ಹೈಡ್ರೊಜನ್ ಅನಿಲಸ್ಫೋಟದಿಂದಲೂ 1937ರಲ್ಲಿ ಅಪಘಾತಕ್ಕೆ ಈಡಾದಾಗ ಇವುಗಳ ಉಪಯೋಗ ನಿಂತುಹೋಯಿತು. ಆದರೆ ಬಲೂನುಗಳು ಮಾತ್ರ ಈಗಲೂ ಬಳಕೆಯಲ್ಲಿವೆ. 

	ವಾಯುವಿಗಿಂತ ಭಾರವಾದ ವಿಮಾನಗಳು : ಇಂಗ್ಲೆಂಡಿನ ಜಾರ್ಜ್ ಕೇಯ್ಲಿ (1773-1857) ಎಂಬಾತ  1799ರಲ್ಲಿ ವಿಮಾನಾಭಿವೃದ್ಧಿಯಲ್ಲಿ ಹೊಸ ಚಿಂತನೆಗೆ ನಾಂದಿಹಾಡಿದ. ಅವನು ವಿಮಾನದ ನಕ್ಷೆ ತಯಾರಿಸಿ ಅದರಲ್ಲಿ ಉತ್ಥಾಪನಬಲಕ್ಕಾಗಿ (ಲಿಫ್ಟ್) ಸ್ಥಿರ ರೆಕ್ಕೆಗಳನ್ನು ಜೋಡಿಸಿದ. ಆದರೆ ಆಗ ಲಘುಎಂಜಿನ್ನಿನ ಉಪಜ್ಞೆ ಆಗಿರಲಿಲ್ಲವಾದ್ದರಿಂದ ಆತ ಗ್ಲೈಡರ್ ನಿರ್ಮಾಣದತ್ತ ಗಮನ ಹರಿಸಿದ. ಆತ ರಚಿಸಿದ ಗ್ಲೈಡರುಗಳ ಆಕಾರ, ರೆಕ್ಕೆಗಳ ರಚನೆ, ಚುಕ್ಕಾಣಿ ವ್ಯವಸ್ಥೆ, ಇತರ ಅಂಗ ಭಾಗಗಳು ಎಲ್ಲವೂ ಆತನ ಕಲ್ಪನಾಶಕ್ತಿಯ ಹಿರಿಮೆ ಸಾರುತ್ತವೆ. ಅವನು ನಡೆಸಿದ ಗ್ಲೈಡರುಗಳ ಯಶಸ್ವೀ ಪ್ಲಾವನದ ಅನಂತರ ಇನ್ನೂ ಹಲವರು ಅದೇ ಸಾಹಸ ಮುಂದುವರಿಸಿದರು. ಇವರಲ್ಲಿ ಜರ್ಮನಿಯ ಆಟ್ಟೊ ಲಿಲಿಯಂಥಾಲ್ (1849-96) ಎಂಬಾತ ಮಾಡಿದ ಸಾಧನೆ ಗಮನಾರ್ಹವಾದುದು. ಈತ 1891-96 ಅವಧಿಯಲ್ಲಿ ಗ್ಲೈಡರ್‍ನಲ್ಲಿ ಸುಮಾರು 2,000 ಹಾರಾಟಗಳನ್ನು ನಡೆಸಿ ವಾಯುಗತಿವಿಜ್ಞಾನಕ್ಕೆ ಸಂಬಂಧಿಸಿದಂತೆ ತಾನು ಗಮನಿಸಿದ ಹಲವು ವಿಷಯಗಳನ್ನು ದಾಖಲಿಸಿದ. ಇದರಿಂದಾಗಿ ವಿಮಾನನಿರ್ಮಾಣ ಕ್ಷೇತ್ರಕ್ಕೆ ಅನುಕೂಲವಾದ ಅಪಾರ ಆಧಾರ ದತ್ತಾಂಶ ಲಭಿಸಿತು. ಕೊನೆಯ ಹಾರಾಟದಲ್ಲಿ ಈತನ ಗ್ಲೈಡರ್ ಅಪಘಾತಕ್ಕೀಡಾಗಿ ಈತನನ್ನು ಬಲಿತೆಗೆದುಕೊಂಡಿತು (1896). ವಿಮಾನದ ಜನಕರೆಂದೇ ಪ್ರಸಿದ್ಧರಾದ ವಿಲ್‍ಬರ್ (1867-1912) ಮತ್ತು ಆರ್‍ವಿಲ್ (1871-1948) ರೈಟ್ ಸಹೋದರರ ಮಿತ್ರನಾಗಿದ್ದ ಇನ್ನೊಬ್ಬ ವಾಯುಯಾನಿ ಆಕ್ಟೇವ್ ಚೆನ್ಯೂಟ್ ಎಂಬಾತ (1832-1910) ಲಿಲಿಯೆಂತಾಲ್‍ನ ಪ್ರಯೋಗಗಳನ್ನು ಮುಂದುವರಿಸಿದ. ಇವರೆಲ್ಲ ನಡೆಸಿದ ಅಧ್ಯಯನದಿಂದ ರೈಟ್ ಸಹೋದರರು ಬಹಳ ಪ್ರಯೋಜನ ಪಡೆದರು.

	ಮೊದಲ ವಿಮಾನಯಾನ : ರೈಟ್ ಸಹೋದರರು ಮೊದಮೊದಲು ಲಿಲಿಯೆಂತಾಲನ ಪ್ರಯೋಗಗಳನ್ನೇ ಮುಂದುವರಿಸಿದರು. ಇಬ್ಬರೂ ಸಾಕಷ್ಟು ಯಂತ್ರವಿಜ್ಞಾನದ ಮಾಹಿತಿ ಪಡೆದಿದ್ದರು. ತಮ್ಮ ವಿಮಾನ ಹಾರಾಟದ ಕನಸನ್ನು ನನಸಾಗಿಸಲು ಅವರು ಹಂತ ಹಂತವಾಗಿ ಮುನ್ನಡೆದರು. ಎರಡೆರಡು ರೆಕ್ಕೆಗಳುಳ್ಳ ಗ್ಲೈಡರುಗಳನ್ನು ನಿರ್ಮಿಸಿದರು. ಇವುಗಳ ಒಳಗೆ ಮಲಗಿ ಗಾಳಿಯಲ್ಲಿ ತೇಲುತ್ತ ಹಾರಾಟವನ್ನು ನಿಯಂತ್ರಿಸಲು ಏನೆಲ್ಲ ಮಾಡಬೇಕೆಂದು ಚಿಂತಿಸಿದರು. ಗ್ಲೈಡರ್ ಮೇಲಕ್ಕೋ ಕೆಳಕ್ಕೋ ತಿರುಗಬೇಕಾದರೆ ಅದರ ಉಪರೆಕ್ಕೆ (ಏಲಿಯರಾನ್ಸ್) ಎಲ್ಲಿರಬೇಕು, ಚುಕ್ಕಾಣಿ ಹೇಗಿರಬೇಕು ಮುಂತಾದ ವಿವರಗಳನ್ನು ಅಭ್ಯಸಿಸಿ ಅಂಥ ಗ್ಲೈಡರುಗಳಲ್ಲಿ ಕುಳಿತು ಹಾರಾಟ ನಡೆಸಿದರು. ನಕ್ಷೆಗಳನ್ನು ಮತ್ತೆ ಮತ್ತೆ ತಿದ್ದಿದರು; ಮಾದರಿಗಳನ್ನು ರಚಿಸಿದರು. ಅಂಥ ಒಂದು ಗ್ಲೈಡರ್ ಮಾದರಿಯನ್ನು ಪರೀಕ್ಷಿಸಿ ಅದರಲ್ಲಿ ತೇಲಿ ನೋಡಿ ಕೊನೆಗೆ ಅದಕ್ಕೆ ಬೇಕಾಗುವ ನೂಕುಬಲವನ್ನು 16 ಅಶ್ವಸಾಮಥ್ರ್ಯದ ಪೆಟ್ರೊಲ್ ಎಂಜಿನಿನ ಸಹಾಯದಿಂದ  ಪಡೆಯಬಹುದೆಂದು ತೀರ್ಮಾನಿಸಿದರು. ಹೀಗೆ ಸಿದ್ಧವಾದ ವಿಮಾನ 1903 ಡಿಸೆಂಬರ್ 17ರಂದು ತನ್ನ ಪ್ರಥಮ ಹಾರಾಟ ನಡೆಸಿತು. ಇದು ಕೇವಲ 12 ಸೆಕೆಂಡ್ ಅವಧಿಯದಾಗಿದ್ದರೂ ಮನುಕುಲದ ಇತಿಹಾಸದಲ್ಲಿ ಇದೊಂದು ಹೊಸ ಅಧ್ಯಾಯ ದಾಖಲಿಸಿತು. 
	ಇಷ್ಟಾದರೂ ಅಮೆರಿಕದ ಜನರಾಗಲೀ ಸರ್ಕಾರವಾಗಲೀ ಇದರಲ್ಲಿ ಆಸಕ್ತಿ ತೋರಲಿಲ್ಲ. ಆದರೂ ರೈಟ್ ಸಹೋದರರು ಎದೆಗುಂದದೆ ತಮ್ಮ ವಿಮಾನವನ್ನು ಅಭಿವೃದ್ಧಿಪಡಿಸುತ್ತ ಮುಂಜಿಗಿದರು. 1908ರಲ್ಲಿ ಅಮೆರಿಕ ಸರ್ಕಾರ ವಿಮಾನದ ಮಿಲಿಟರಿ ಉಪಯೋಗಗಳನ್ನು ಮನಗಂಡು ರೈಟ್ ಸಹೋದರರಿಂದ ವಿಮಾನವನ್ನು ಖರೀದಿಸಲು ಮುಂದಾಯಿತು. ಒಂದನೆಯ ಮಹಾಯುದ್ಧದ ಕಾಲದಲ್ಲಿ (1914-19) ವಿಮಾನ ನಿರ್ಮಾಣಕ್ಕೆ ಉತ್ತೇಜನ ಲಭಿಸಿತು. ಮಿಲಿಟರಿ ಕಾರ್ಯಾಚರಣೆ ಗಳಿಗಾಗಿಯೇ ವಿಮಾನಗಳ ನಿರ್ಮಾಣವಾಯಿತು. ಒಂದನೆಯ ಯುದ್ಧಾನಂತರ ನಾಗರಿಕ ವಿಮಾನಯಾನದ ಚಿಂತನೆ ಪ್ರಾರಂಭವಾಯಿತು. 

	ಹ್ಯಾಂಡ್ಲೀ-ಪೇಜ್ ಟ್ರ್ಯಾನ್ಸ್‍ಪೋರ್ಟ್ ಎಂಬ ಬ್ರಿಟಿಷ್ ಸಂಸ್ಥೆ 1920ರಲ್ಲಿ ಮೊತ್ತಮೊದಲ ನಾಗರಿಕ ವಿಮಾನಯಾನ ಆರಂಭಿಸಿತು. ಇದರಲ್ಲಿ 12 ಆಸನಗಳಿದ್ದುವು. 1927ರಲ್ಲಿ ಚಾಲ್ರ್ಸ್ ಎ. ಲಿಂಡ್‍ಬರ್ಗ್ (1902-74) ಎಂಬಾತ ಏಕಾಂಗಿಯಾಗಿ ವಿಮಾನದಲ್ಲಿ ಅಟ್ಲಾಂಟಿಕ್ ಸಾಗರ ದಾಟಿದಾಗ ವಿಮಾನಯಾನದಲ್ಲಿ ಜನರ ಆಸಕ್ತಿ ಹೆಚ್ಚಾಯಿತು. 

	ಜರ್ಮನಿಯ ಹೈನ್‍ಕೆಲ್ ಎಂಬ ವಿಮಾನ ಜೆಟ್ ಎಂಜಿನನ್ನು ಅಳವಡಿಸಿ 1939 ಆಗಸ್ಟ್ 27ರಂದು ಮೊದಲ ಪ್ರಾಯೋಗಿಕ ಹಾರಾಟ ನಡೆಸಿತು. 1944ರಲ್ಲಿ ಬ್ರಿಟಿಷ್ ವಿಮಾನವೂ 1945ರಲ್ಲಿ ಅಮೆರಿಕದ ಲಾಕ್‍ಹೀಡ್ ವಿಮಾನವೂ ಹಾರಾಟ ನಡೆಸಿದುವು. 1949ರಲ್ಲಿ ಬ್ರಿಟನ್ನಿನ ಹ್ಯಾವಿಲೆಂಡ್ ಕಾಮೆಟ್ ವಿಮಾನ ಸಂಸ್ಥೆ ಜೆಟ್‍ವಿಮಾನದ ವಾಣಿಜ್ಯ ಹಾರಾಟ ನಡೆಸಿತಾದರೂ ತಾಂತ್ರಿಕ ತೊಂದರೆಗಳಿಂದ ನಿಲ್ಲಿಸಬೇಕಾಯಿತು. 1958ರಲ್ಲಿ ಬೋಯಿಂಗ್ 707 ವಿಮಾನ ಯಶಸ್ವೀ ವಾಣಿಜ್ಯ ಪ್ಲಾವನ ಪ್ರಾರಂಭಿಸಿದಾಗ ಜೆಟ್ ಯುಗ ಪ್ರಾರಂಭವಾಯಿತು. ಅನಂತರ ರಚನಾ ಸಾಮಗ್ರಿಗಳು, ವೈಮಾನಿಕ ಉಪಕರಣಗಳು, ನೋದನ ವ್ಯವಸ್ಥೆ, ಆಕಾಶದಲ್ಲಿ ಸ್ಥಿರತೆ ಹಾಗೂ ಸಮಗ್ರ ನಿಯಂತ್ರಣ ವ್ಯವಸ್ಥೆಗೆ ಸಂಬಂಧಿಸಿದಂತೆ ತಂತ್ರವಿದ್ಯೆಯಲ್ಲಿ ನಡೆದ ಅಪಾರ ಪ್ರಗತಿಯಿಂದಾಗಿ ವಿಮಾನಗಳ ಗಾತ್ರದಲ್ಲೂ ವೇಗದಲ್ಲೂ ಹೆಚ್ಚಳವುಂಟಾಯಿತು. ಇನ್ನೊಂದೆಡೆ ಅತ್ಯಂತ ಲಘುವಿಮಾನಗಳ ತಯಾರಿಕೆಯೂ ಪ್ರಾರಂಭವಾಗಿ ಮಿಲಿಟರಿ ಉದ್ದೇಶಗಳಿಗಾಗಿ ಚಾಲಕರಹಿತ ದೂರನಿಯಂತ್ರಿತ ವಿಮಾನಗಳು ಕೂಡ ಬಳಕೆಗೆ ಬಂದುವು. 

	ವಿಮಾನಾಭಿವೃದ್ಧಿಯ ಜೊತೆಯಲ್ಲೇ ರಾಕೆಟ್ ಎಂಜಿನ್‍ಗಳ ಸಂಶೋಧ ನೆಯೂ ಪ್ರಾರಂಭವಾಯಿತು. ರಾಕೆಟ್ಟುಗಳು ನಿರ್ವಾತ ಪ್ರದೇಶದಲ್ಲೂ ಕಾರ್ಯನಿರ್ವಹಿಸಬಲ್ಲುವೆಂದು ತಿಳಿದೊಡನೆ ಮಾನವನ ಗಮನ ಅಂತರಿಕ್ಷದೆಡೆಗೆ ಹರಿಯಿತು. ಇದರ ಫಲವಾಗಿ 1950 ಹಾಗೂ 1960ರ ದಶಕದಲ್ಲಿ ಆಕಾಶಯಾನ ಎಂಜಿನಿಯರಿಂಗ್‍ನಲ್ಲಿ (ಆಸ್ಟ್ರೊನಾಟಿಕಲ್ ಎಂಜಿನಿಯರಿಂಗ್) ದೇಶ ದೇಶಗಳ ನಡುವೆ  ಸ್ಪರ್ಧಾತ್ಮಕ ಸಂಶೋಧನೆ ನಡೆಯಿತು. 1957ರಲ್ಲಿ ರಷ್ಯನ್ನರು ಸ್ಪೂಟ್ನಿಕ್  ಎಂಬ ಗಗನನೌಕೆಯನ್ನು ಭೂಕಕ್ಷೆಯಲ್ಲಿ ಹಾರಿಬಿಟ್ಟಾಗ ಆಕಾಶಯಾನದ ಹೊಸಯುಗಕ್ಕೆ ನಾಂದಿಯಾಯಿತು. 1969 ಜುಲೈ 20ರಂದು ಅಮೆರಿಕದ ಗಗನಯಾತ್ರಿ ಗಳಾದ ನೀಲ್ ಆರ್ಮ್‍ಸ್ಟ್ರಾಂಗ್ (1930) ಮತ್ತು ಎಡ್ವಿನ್‍ಇ.ಆಲ್‍ಡ್ರಿನ್ (1930) ಎಂಬವರು ಚಂದ್ರನ ಮೇಲೆ ಕಾಲಿಟ್ಟು ಅಲ್ಲಿಂದ “ಇದು ಒಬ್ಬ ವ್ಯಕ್ತಿಗೆ ಬಲು ಪುಟ್ಟ ಹೆಜ್ಜೆ, ಆದರೆ ಮನುಕುಲಕ್ಕೆ ಹನುಮಂತ ಲಂಘನ” ಎಂಬ ಅರ್ಥ ಮಿಡಿಯುವ ಮಾತನ್ನು ನುಡಿದಾಗ ಮಾನವ ಬಾಹ್ಯಾಕಾಶದಲ್ಲಿ ಇನ್ನೂ ದೂರ ಪಯಣಿಸಬಹುದೆಂದು ಕನಸು ಕಾಣತೊಡಗಿದ. 

	ಈ ಆಕಾಶಯಾನಗಳಿಂದ ದೊರೆತ ಅಪಾರ ಅನುಭವ ಹಾಗೂ ವಾಯುಗತಿವಿಜ್ಞಾನಕ್ಕೆ ಸಂಬಂಧಿಸಿದಂತೆ ತಿಳಿದ ಹೊಸ ಅಂಶಗಳು ವಿಮಾನಯಾನಕ್ಕೆ ಉಪಯೋಗವಾದುವು. ಹೀಗಾಗಿ ವಿಮಾನಯಾನ ಎಂಜಿನಿಯರಿಂಗ್ ಮತ್ತು ಅಂತರಿಕ್ಷಯಾನ ಎಂಜಿನಿಯರಿಂಗ್‍ಗಳನ್ನು ಬೇರೆ ಬೇರೆಯಾಗಿ ನೋಡದೆ ಒಟ್ಟಿಗೇ ಪರಿಗಣಿಸಬೇಕೆಂದು ನಿರ್ಧರಿಸಿ ಈ ಎರಡು ತಂತ್ರವಿದ್ಯಾ ಶಾಖೆಗಳನ್ನು ಒಟ್ಟಾಗಿ ವೈಮಾಂತರಿಕ್ಷ ಎಂಜಿನಿಯರಿಂಗ್ ಎಂದೇ ಈಗ ಗುರುತಿಸಲಾಗುತ್ತಿದೆ. ಈಗ ಸಮುದ್ರದ ನೀರಿನ ಮೇಲೆ ಇಳಿದು ಅಲ್ಲಿಂದಲೇ ಮೇಲೆ ಹಾರುವ ಸಮುದ್ರ ವಿಮಾನಗಳು, ಓಡುದಾರಿಯ (ರನ್‍ವೇ) ನೆರವಿಲ್ಲದೇ ನೇರವಾಗಿ ಮೇಲಕ್ಕೇರಿ ಕೆಳಗಿಳಿಯಬಲ್ಲ ಹೆಲಿಕಾಪ್ಟರ್‍ಗಳು, ಓಡುದಾರಿ ಇರುವಾಗ ವಿಮಾನವಾಗಿಯೂ ಇರದಾಗ ಹೆಲಿಕಾಪ್ಟರ್ ಆಗಿಯೂ ಉಪಯೋಗಿಸಬಲ್ಲ ಪರಿವರ್ತಕ ವಿಮಾನಗಳು (ಕನ್ವರ್ಟಿಪ್ಲೇನ್ಸ್) ವಾಯುಮೆತ್ತೆಯನ್ನು ಉಪಯೋಗಿಸಿ ಭೂಮಿಗಿಂತ ಸ್ವಲ್ಪವೇ ಮೇಲೆ ಚಲಿಸುವ ಹೋವರ್‍ಕ್ರಾಫ್ಟ್‍ಗಳು ಮುಂತಾದ ಹಲವು ಬಗೆಗಳು ಬಳಕೆಗೆ ಬಂದಿವೆ. ವಾಯುಮೆತ್ತೆಯ ರೈಲುಗಳ ಬಗ್ಗೆಯೂ ಈಗ ಸಂಶೋಧನೆ ನಡೆದಿದೆ (ಎವಿಸಿ-ಏರ್ ಕುಶನ್ ವೆಹಿಕಲ್ಸ್). ಆದ್ದರಿಂದ ವೈಮಾಂತರಿಕ್ಷ ಎಂಜಿನಿಯರಿಂಗ್‍ನಲ್ಲಿ ಮುಂದುವರಿದ ಸಂಶೋಧನೆ 21ನೆಯ ಶತಮಾನದಲ್ಲಿ ವಾಯುಯಾನದ ಹೊಸ ಆಯಾಮಗಳನ್ನು ಪ್ರಕಟಗೊಳಿಸಲಿದೆಯೆಂದು ನಿರೀಕ್ಷಿಸಬಹುದು.		
	(ಜಿ.ಆರ್.)
   *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ